Dr. Chetan Ganteppanavar
× Home About Dr. Chetan Specializations Services Gallery Blogs FAQs
Contact Us

#11 Your Doctor Isn’t a Mind Reader! 10 Things You Must Share - Message from Dr. Chetan K. Ganteppanavar

Published

ನಿಮ್ಮ ವೈದ್ಯರ ಬಳಿ ಹೋದಾಗ ನೀವು ಅವರಲ್ಲಿ ಏನೆಲ್ಲಾ ಹೇಳಬೇಕು ?

 

 

 

1. ಕಾಯಿಲೆಯ ಅವಧಿ : 

ನೀವು ಈಗ ಅನುಭವಿಸುವ ಮುಖ್ಯ ತೊಂದರೆ ಏನು ಅಂಥ ಹೇಳಬೇಕು. ಎಷ್ಟು ದಿನದಿಂದ ಇದೆ, ಹೇಗೆ ಶುರು ಆಯಿತು ಮತ್ತು ಮೊದಲಿಗಿಂತ ಈಗ ಹೇಗಿದೆ - ಕಡಿಮೆ ಅಥವಾ ಜಾಸ್ತಿ ಆಗಿದೆಯಾ ? ಎಲ್ಲ ವಿಚಾರವನ್ನು ಸರಿಯಾಗಿ ಹೇಳಬೇಕು.

 

2. ಮುಖ್ಯ ತೊಂದರೆ ಬಿಟ್ಟು - ಬೇರೆ ಸಣ್ಣ ಪುಟ್ಟ ಸಮಸ್ಯೆ :

ಉದಾಹರಣೆಗೆ : ನಿಮಗೆ ತುಂಬಾ ಜ್ವರ ಇದೆ ಅಂತ ನೀವು ವೈದ್ಯರಲ್ಲಿ ಬಂದಿರುತ್ತಿರಾ. ಅದರ ಜೊತೆಗೆ, ತಲೆನೋವು, ಮೈ - ಕೈ  ನೋವು , ಸುಸ್ತು, ನಿದ್ದೆ ಇಲ್ಲ ಅಂಥ ಹೇಳುತ್ತೀರಾ. ಕೆಲವೊಮ್ಮೆ,  ಜ್ವರದ ಜೊತೆಗೆ ನಿಮಗೆ 4 ರಿಂದ 5 ಸಲ ಬೇಧಿ ಆಗಿರುತ್ತದೆ , ಅದನ್ನು ಹೇಳುವುದೇ ಇಲ್ಲ. ಈ ರೀತಿ ನಿಮಗೆ ಆಗುವ ತೊಂದರೆಗಳನ್ನು ಸರಿಯಾಗಿ ಹೇಳಬೇಕು. ಯಾವುದನ್ನು ಮರೆಯಬಾರದು. ಇದರಲ್ಲಿ, ಬೇಧಿ ಆಗಿರುವುದು ತುಂಬಾ ಮುಖ್ಯ.

 

3. ಜೊತೆಗಿರುವ ಕಾಯಿಲೆಗಳ ಬಗ್ಗೆ ಮುಚ್ಚಿಡುವುದು :

ಉದಾಹಣೆಗೆ: ನೀವು ನರರೋಗ ಹಾಗು ಬೆನ್ನು ನೋವಿಗೆ ಬೇರೊಬ್ಬರ ಬಳಿ ಚಿಕಿತ್ಸೆ ತಗೆದುಕೊಳ್ಳುತ್ತಿರುವಿರಿ. ನಿಮಗೆ ಎದೆನೋವು ಅಂಥ ನೀವು ಮನೆಯ ಹತ್ತಿರದ ಫಿಜಿಷಿಯನ್ ವೈದ್ಯರ ಬಳಿ ಬಂದಿರುತ್ತಿರ. ವೈದ್ಯರ ಬಳಿ ಬಂದಾಗ ನರರೋಗದ ಬಗ್ಗೆ ಹೇಳುವುದೇ ಇಲ್ಲ. ಅದು ನರ ರೋಗ - ಈಗಿರುವುದು ಎದೆ ನೋವು. ಅವರ ಫೈಲ್ ಬೇರೆ, ಇವರ ಫೈಲ್ ಬೇರೆ. ಅವರ ಕಾಯಿಲೆ ಬೇರೆ, ಅವರ ಮಾತ್ರೆ ಬೇರೆ, ಇವರಿಗೆ ಹೇಳುವ ಅಗತ್ಯವಿಲ್ಲ ಅಂಥ ತುಂಬಾ ಜನರು ತಮಗೆ ಇರುವ ಬೇರೆ ಚಿಕಿತ್ಸೆಯ ವಿಚಾರವನ್ನು ಹೇಳುವುದಿಲ್ಲ. ವೈದ್ಯರು ಕೇಳಿದಾಗ ಮಾತ್ರ ಹೇಳುವರು. ಇದು ತುಂಬಾ ಸಾಮಾನ್ಯ. ದೇಹವು ಒಂದು ಯಂತ್ರದ ಥರ - ಚಿಕಿತ್ಸೆ ನೀಡುವ ವೈದ್ಯರಿಗೆ ಎಲ್ಲ ಮಾಹಿತಿ ಕೊಡಬೇಕು.

 

4. ಕಾಯಿಲೆ ಬಗ್ಗೆ ಸರಿಯಾದ ಮಾಹಿತಿ ಕೊಡದೆ ಇರುವುದು : 

ಉದಾಹರಣೆಗೆ : ನಿಮಗೆ ಸಕ್ಕರೆ ಮತ್ತು ಬಿ.ಪಿ ಸಮಸ್ಯೆ ಇರುತ್ತದೆ. ವೈದ್ಯರು ಕೇಳಿದಾಗ - ಬಿ. ಪಿ , ಶುಗರ್ ಇಲ್ಲ ಎಂದು ಹೇಳುವಿರಿ. ಮತ್ತೆ ಇನ್ನೊಮ್ಮೆ ವೈದ್ಯರು ಕೇಳಿದಾಗ - ಮಾತ್ರೆ ತೊಗೊಳ್ಳುತ್ತೇವೆ - ಈಗ ಅದು ನಮಗೆ ಕಂಟ್ರೋಲ್ ಅಲ್ಲಿ ಇದೆ ಎನ್ನುವರು. ಇದು ತಪ್ಪು ಮಾಹಿತಿ. ಸರಿಯಾದ ಮಾಹಿತಿ ಏನೆಂದರೆ - ನಮಗೆ ಬಿ.ಪಿ ಮತ್ತು ಶುಗರ್ ಸಮಸ್ಯೆ ಇದೆ - ಮಾತ್ರೆ ಮೇಲೆ ಅದನ್ನು ನಿಯಂತ್ರಿಸಿದ್ದೇವೆ (ಕಂಟ್ರೋಲ್ ಅಲ್ಲಿ ಇದೆ). ಆದ್ದರಿಂದ ಏನೆಲ್ಲಾ ಮಾತ್ರೆ ನೀವು ತಗೆದುಕೊಳ್ಳುತ್ತಿರುವಿರೋ ಅದೆಲ್ಲ ಸರಿಯಾಗಿ ಹೇಳಬೇಕು.

 

5. ಅಭ್ಯಾಸ / ಚಟಗಳು :

ಎಷ್ಟೋ ಜನರು ತಮಗೆ ಇರುವ ಅಭ್ಯಾಸ ಮತ್ತು ಚಟಗಳು ಇರುವ ಬಗ್ಗೆ ವೈದ್ಯರಲ್ಲಿ ಹೇಳುವುದಿಲ್ಲ. ಕಾರಣಗಳು ಹಲವಾರು :

A. ಕೇಸ್ ಪೇಪರ್ ಅಲ್ಲಿ ವೈದ್ಯರು ಬರೆಯುತ್ತಾರೆ - ಅದನ್ನು ಮನೆಯಲ್ಲಿ ನೋಡಿದರೆ ತೊಂದರೆ ಆಗುತ್ತೆ. B.ಅದನ್ನ ವೈದ್ಯರಿಗೆ ಯಾಕೆ ಹೇಳಬೇಕು ? 

C.ಇನ್ಸೂರೆನ್ಸ್ (ವಿಮೆ) claim ಆಗುವುದಿಲ್ಲ - ಆದ್ದರಿಂದ ಹೇಳುವುದು ಬೇಡ,  

D.ನನ್ನ ಜೊತೆಗೆ ಬಂದವರಿಗೆ ನನ್ನ ಚಟಗಳು ಬಗ್ಗೆ ಗೊತ್ತಿಲ್ಲ - ಅದಕ್ಕೆ ಇಲ್ಲ ಎಂದು ಸುಳ್ಳು ಹೇಳಿ ಬಿಡ್ತೀನಿ

ಈ ಥರ ಹಲವಾರು ಕಾರಣಗಳಿಂದ ವಿಚಾರಗಳನ್ನು ಮುಚ್ಚಿಡಲಾಗುತ್ತೆ. ಇದರಿಂದ ವೈದ್ಯರು ಮಾಡುವ diagnosis ಅಲ್ಲಿ ವ್ಯತ್ಯಯ ಉಂಟಾಗಿ ಕೊಡುವ ಚಿಕಿತ್ಸೆ ಅಷ್ಟೊಂದು ಪರಿಣಾಮಕಾರಿ ಆಗುವುದಿಲ್ಲ.

 

6. ಮಾತ್ರೆ / ಔಷಧಿ ಬಿಟ್ಟಿರುವ ಬಗ್ಗೆ : 

ಎಷ್ಟೋ ಸಲ ವೈದ್ಯರಲ್ಲಿ ಬಂದಾಗ - ಹಿಂದಿನ ಭೇಟಿಯಲ್ಲಿ ಕೊಟ್ಟ ಮಾತ್ರೆ ಅಥವಾ ಔಷಧಿ ಖಾಲಿ ಆಗಿ ಬಿಟ್ಟಿರುತ್ತೆ .ಎಷ್ಟೋ ದಿನ ಆದನಂತರ ಮತ್ತೆ ಬರುತ್ತಾರೆ. ಮಾತ್ರೆ ನಿಂತು ಹೋಗಿರುತ್ತೆ - ಶುಗರ್ ಅಥವಾ ಬಿ.ಪಿ ಗಗನಕ್ಕೆ ಏರಿರುತ್ತೆ. ವೈದ್ಯರಲ್ಲಿ ಮಾತ್ರೆ ಖಾಲಿ ಆಗಿ,  ಚಿಕಿತ್ಸೆ ನಿಂತು ಹೋಗಿರುವ ಬಗ್ಗೆ ಹೇಳುವುದಿಲ್ಲ. ಹೇಳಿದರೆ ಕೋಪಗೊಳ್ಳುತ್ತಾರೆ, ಬಯ್ಯುತ್ತಾರೆ ಎಂದು ಭಯ. ಮಾತ್ರೆ ನಿಲ್ಲಿಸಿರುವ ಬಗ್ಗೆ ಸತ್ಯ ಹೇಳಲಿಲ್ಲವೆಂದರೆ, ವೈದ್ಯರು ಭಾವಿಸುವುದು ಏನೆಂದರೆ - ಯಾಕೋ ಮಾತ್ರೆ ಡೋಸ್ ಕಡಿಮೆ ಆಗಿದೆ , ಇವರಿಗೆ ಏನು ಕಂಟ್ರೋಲ್ ಬಂದಿಲ್ಲ - ಹೆಚ್ಚಿನ ಡೋಸ್ ಕೊಡೋಣ, ಎಂದು ವೈದ್ಯರು ನಿಮ್ಮ ಡೋಸ್ ಜಾಸ್ತಿ ಮಾಡುವ ಸಾಧ್ಯತೆ ಇದ್ದು, ಅದರಿಂದ ದುಷ್ಪರಿಣಾಮ ಆಗುತ್ತವೆ. ಅದೇ, ನೀವು ಮಾತ್ರೆ ಬಿಟ್ಟಿರುವ ಬಗ್ಗೆ ಹೇಳಿದರೆ - ವೈದ್ಯರು ಆ ವಿಚಾರ ಗಮನದಲ್ಲಿ ಇಟ್ಟುಕೊಂಡು, ಸ್ವಲ್ಪ ಬುದ್ಧಿ ಮಾತು ಹೇಳಿ, ಬೈದು, ಮಾತ್ರೆ ಬಿಟ್ಟರೆ ಏನಾಗುತ್ತೆ ಎಂದು ತಿಳಿಸಿ,  ಸರಿಯಾದ ಚಿಕಿತ್ಸೆ ನೀಡುವರು.

 

7. ಶಸ್ತ್ರ ಚಿಕಿತ್ಸೆ ಹಾಗು ಅಲರ್ಜಿ :

ಈ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕು. ಚಿಕ್ಕ ಪುಟ್ಟ ಶಸ್ತ್ರ ಚಿಕಿತ್ಸೆ ಆಗಿದ್ದರು ಮರೆಯದೆ ಹೇಳಬೇಕು. ಅಲರ್ಜಿ ಎಂದರೆ ಬರೀ ಮಾತ್ರೆ ಅಷ್ಟೇ ಅಲ್ಲ - ಧೂಳು , ಹೊಗೆ, ಆಹಾರ, ಹಣ್ಣು ಈ ಥರ ಏನೇ ಇದ್ದರೂ ಹೇಳಬೇಕು.

 

8. ವೈದ್ಯರು ಕೋಪಗಳ್ಳುವು ಬಗ್ಗೆ :

ಒಂದು ಸನ್ನಿವೇಶ : ತುರ್ತು ಪರಿಸ್ಥಿತಿ ಅಂಥ ಬೇರೊಬ್ಬರ ಬಳಿ - 3 ಅಥವಾ 4 ತಿಂಗಳಿಂದ ಚಿಕಿತ್ಸೆ ಪಡೆದು , ಮತ್ತೆ ಹಳೆ ವೈದ್ಯರ ಬಳಿ ಹೋಗುತ್ತೀರಾ. ಆವಾಗ ಈ 3 - 4 ತಿಂಗಳ ಚಿಕಿತ್ಸೆ ಫೈಲ್ ತೋರಿಸುವುದಿಲ್ಲ. ನಮ್ಮ ಹಳೆ ವೈದ್ಯರು ಏನು ಎಂದು ಕೊಳ್ಳುತ್ತಾರೋ ! ಬಯ್ಯುತ್ತಾರೋ ! ಏನಾದರೂ ಅಂದರೆ ? ಅದು ತಪ್ಪಾಗುತ್ತೆ ಅದಕ್ಕೆ, ತೋರಿಸೋದು ಬೇಡ ! ಈ ಥರ 100 ವಿಚಾರಗಳನ್ನು ನಾವೇ ಊಹಿಸಿಕೊಳ್ಳುತ್ತೇವೆ. ಇದು ತಪ್ಪು. ನಿಮ್ಮ ಚಿಕಿತ್ಸೆಯ ವಿವರ ಸರಿಯಾಗಿ ತಿಳಿಸಬೇಕು.

 

9. Diet (ಡಯಟ್), ಆಹಾರ ಪದ್ಧತಿ, ಕೆಲಸದ ಒತ್ತಡ, ನಿದ್ದೆ ಇತ್ಯಾದಿ ಬಗ್ಗೆ ಸರಿಯಾಗಿ ಹೇಳಬೇಕು.

 

10. ಅಣುವಂಶಿಕತೆ / ಫ್ಯಾಮಿಲಿ ಅಲ್ಲಿ ಇರುವ ರೋಗಗಳ ಬಗ್ಗೆ ಸರಿಯಾಗಿ ಹೇಳಬೇಕು : 

ಉದಾಹರಣೆಗೆ : ನಮ್ಮ ತಂದೆ - ತಾಯಿ ಇಬ್ಬರಿಗೂ ಬಿ.ಪಿ ಇದು, ತಾತನವರಿಗೆ ಹೃದಯಾಘಾತ ಆಗಿತ್ತು, ಅಜ್ಜಿಗೆ ಸಕ್ಕರೆ ಕಾಯಿಲೆ ಇದೆ ಇತ್ಯಾದಿ. ಹಾಗು ಸಂಬಂಧದಲ್ಲಿ ಆದ ಮದುವೆ, ಮನೆಯಲ್ಲಿ ಯಾರಿಗಾದರೂ ಕ್ಯಾನ್ಸರ್ (cancer) ಇದ್ದಲ್ಲಿ ಮರೆಯದೆ ಹೇಳಬೇಕು. ಸಾಂಸಾರಿಕ ತೊಂದರೆ, ಗುಪ್ತ ರೋಗ, ಅನೈತಿಕ ಸಂಬಂಧ ಎಲ್ಲವನ್ನೂ ಸರಿಯಾಗಿ ಹೇಳಬೇಕು. ನಿಮ್ಮೊಂದಿಗೆ ಬಂದವರ ಎದುರಿಗೆ ನಿಮಗೆ ಮುಜುಗರವಾದರೆ , ವೈದ್ಯರಿಗೆ ಹೇಳಿ - ಏಕಾಂತದಲ್ಲಿ ಎಲ್ಲ ವಿಚಾರವನ್ನು ಬಿಡಿಸಿ ಹೇಳಬೇಕು.

 

ವೈದ್ಯರಲ್ಲಿ ಬಂದಾಗ ನೀವು ಎಷ್ಟು ಮುಕ್ತವಾಗಿ ಮಾತಾಡುತ್ತೀರಿ, ಅಷ್ಟೇ ಉತ್ತಮವಾದ ಚಿಕಿತ್ಸೆ ದೊರೆಯುತ್ತದೆ. ನಿಮ್ಮ ವೈದ್ಯರು ನಿಮ್ಮ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಾಗ ಅವರು ಒಳ್ಳೆಯ ಚಿಕಿತ್ಸೆ ನೀಡಬಲ್ಲರು.

 

ಉತ್ತಮವಾದ ಚಿಕಿತ್ಸೆ, ಲ್ಯಾಬ್ ಸೌಲಭ್ಯ, ಔಷಧಾಲಯ, ಈ.ಸಿ.ಜಿ. , ಎಕ್ಸ - ರೇ , ಡೇ - ಕೇರ್, 

ಪರಿಣಿತ ವೈದ್ಯರ ಸಂದರ್ಶನಕ್ಕಾಗಿ ಇಂದೇ ಭೇಟಿ ನೀಡಿ - ಕಲ್ಪನಾ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್, ಕಾಳಿದಾಸ ನಗರ, ಹುಬ್ಬಳ್ಳಿ. 

 

ನಿಮ್ಮ ಕಲ್ಪನೆಗೂ ಮೀರಿದ ಉತ್ತಮ ಚಿಕಿತ್ಸೆ @ ಕಲ್ಪನಾ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್

ಸರ್ವೇ ಜನಾಃ ಸುಖಿನೋ ಭವಂತು.

 

 

Emergency